ಬಸ್ರೂರಿನ ಇತಿಹಾಸದ ಮತ್ತೊಂದು ಗರಿ- ಶ್ರೀ ಶಾರದಾ ಕಾಲೇಜು, ಬಸ್ರೂರು.

ಕ್ರಿ.ಶ 1155ರ ಶಾಸನದಲ್ಲಿ ಉಲ್ಲೇಖಿಸಿದಂತೆ ಮಧ್ಯಕಾಲೀನ ಯುಗದಲ್ಲಿ ಬಸ್ರೂರು ಒಂದು ನಗರ ಪ್ರದೇಶವಾಗಿದ್ದು, ವ್ಯಾಪಾರದ ಕೇಂದ್ರವಾಗಿದ್ದು, ‘ಹೊಸಪಟ್ಟಣ ಬಸುಕಿಪುರ’ ಎಂಬ ಹೆಸರಿನಿಂದ ಪರಿಚಿತವಾಗಿತ್ತು.

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಇದೊಂದು ಸಂಸ್ಕøತಿಗಳ ಸಂಗಮವಾಗಿತ್ತು. 17 ಮತ್ತು 18ನೇ ಶತಮಾನದಲ್ಲಿ ಈ ನಗರಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರು ಈ ನಗರದ, ಸಂಸ್ಕøತಿಯ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಈ ನಗರವು ಸಮೃದ್ಧವಾದ ವಾತಾವರಣದಿಂದ ಕೂಡಿದ್ದು ಸುತ್ತಮುತ್ತ ಭತ್ತದ ಹೊಲ ಮತ್ತು ತೆಂಗಿನ ತೋಟದಿಂದ ಕಂಗೊಳಿಸುತ್ತಿದೆ. ತೋಟಗಳಿಗೆ ವಾರಾಹಿ ನದಿಯ ನೀರನ್ನು ಬಳಸಲಾಗುತ್ತಿತ್ತು.
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಆಡಳಿತದಲ್ಲಿ ಹಲವಾರು ಬದಲಾವಣೆ ಆಗಿದ್ದರಿಂದ ‘ಕುಂದಾಪುರ’ ನಗರವು ಆಡಳಿತದ ಪ್ರಮುಖ ಕಛೇರಿ ಆಗಿ ಮಾರ್ಪಟ್ಟಿತು. ಬಸ್ರೂರು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಸಾಲಿಗೆ ಸೇರಿತು.
1934ರಲ್ಲಿ ಹಳ್ಳಿಯ ಜನರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸ್ಥಳೀಯರು ‘ದಿ ಹಿಂದೂ ಸ್ಕೂಲ್ ಅಸೋಸಿಯೇಷನದ’ ನ್ನು ರಚಿಸಿದರು. ಇದರ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾ ಕಾಲೇಜಿನ ಟ್ರಸ್ಟ್ 1972ರಲ್ಲಿ ರೂಪುಗೊಂಡಿತು. ಈ ಟ್ರಸ್ಟ್‍ನ ವತಿಯಿಂದ 1973ರಲ್ಲಿ ಶ್ರೀ ಶಾರದಾ ಕಾಲೇಜನ್ನು ಸ್ಥಾಪಿಸಲಾಯಿತು.